ಕ್ಷೇತ್ರಪತಿಯ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ಬಿದ್ದಾಗ.. - 4/5 ****
Posted date: 20 Sun, Aug 2023 10:26:41 AM
ಚಿತ್ರ : ಕ್ಷೇತ್ರಪತಿ 
ನಿರ್ದೇಶಕ : ಶ್ರೀಕಾಂತ್ ಕಟಗಿ 
ಸಂಗೀತ : ರವಿ ಬಸ್ರೂರ್
ಛಾಯಾಗ್ರಹಣ : ಶಿವಸಾಗರ್
ತಾರಾಗಣ : ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ನಾಟ್ಯರಂಗ, ಹರ್ಷ ಅರ್ಜುನ್ ಹಾಗೂ ಇತರರು...

 
ರೈತ ನಮ್ಮ ಹಸಿವು ನೀಗಿಸುವ ಅನ್ನದಾತ,  ಆತನ ಬದುಕು ಚೆನ್ನಾಗಿರುವಂತೆ  ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಅದರೆ ರಾಜಕಾರಣಿಗಳು ತಮ್ಮ  ಧನದಾಹದಿಂದ  ಆತನ ಅಸ್ತಿತ್ವವನ್ನೇ ನಾಶಗೊಳಿಸಲು ಹೊರಟಿದ್ದಾರೆ. ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ. ವಿದ್ಯಾವಂತ ರೈತನೊಬ್ಬ ತನ್ನ ಹಾಗೂ ಉಳಿದ ರೈತರ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಡುವ ಕಥೆಯೇ ಕ್ಷೇತ್ರಪತಿ.
 
ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು, ಆತ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು, ರಾಜಕಾರಣಿಗಳ ಕುತಂತ್ರದಿಂದ ವಿದೇಶೀ ಬಂಡವಾಳಶಾಹಿಗಳ ಉದ್ಯಮ ಸ್ಥಾಪನೆಗೆ ಕೃಷಿ ಜಮೀನು ಬಲಿಯಾಗುವುದನ್ನು ತಡೆಯಬೇಕು, ರೈತ ಬೆಳೆದ ಧಾನ್ಯಗಳಿಗೆ ಸೂಕ್ತ ಬೆಲೆ ಸಿಗದೆ  ಆತ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬೇಕು  ಈ ಎಲ್ಲ ಅಂಶಗಳ ಮೇಲೆ ಚಿತ್ರದ ಕಥೆ ಸಾಗುತ್ತದೆ. 
ಕೃಷಿಕನ ಬದುಕು, ಬವಣೆಯ ಸುತ್ತ  ನೈಜತೆಗೆ  ಹತ್ತಿರವಾಗಿರುವಂತೆ  ನಿರ್ದೇಶಕ ಶ್ರೀಕಾಂತ್ ಕಟಗಿ ಅವರು ಕಥಾಹಂದರ ಹೆಣೆದಿದ್ದಾರೆ.
ದುಡಿಮೆಯ ಬದುಕು ಎಂದು ನಂಬಿದ ರೈತ. ತನ್ನ ಜೀವನದುದ್ದಕ್ಕೂಹೊಲದಲ್ಲಿ  ಶ್ರಮವಹಿಸಿ ದುಡಿಯುತ್ತಾನೆ. ತನ್ನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಅವರ ಸಂತೋಷ ನೋಡಲು ಆಸೆಪಡುತ್ತಾನೆ.ಅಂಥವನ ಬಾಳಿಗೇ ಬೆಂಕಿ ಹಚ್ಚುವವರ  ವಿರುದ್ದ ಸಿಡಿದೆದ್ದು ನಿಲ್ಲುವ  ವಿದ್ಯಾವಂತ ರೈತನಾಗಿ  ನಾಯಕ ನವೀನ್ ಶಂಕರ್ ಕಾಣಿಸಿಕೊಂಡಿದ್ದಾರೆ.
 
 
ಇಂಜಿನಿಯರಿಂಗ್ ಮಾಡಿ ವಿದೇಶಕ್ಕೆ ಹೋಗುವ ಕನಸಿಟ್ಟುಕೊಂಡಿದ್ದ ಬಸವರಾಜ ಹಾದಿಮನಿ ( ನವೀನ್ ಶಂಕರ್) ತನ್ನ ಕನಸನ್ನು ಬದಿಗೊತ್ತಿ, ಹೋರಾಟದ ಹಾದಿ ತುಳಿಯಬೇಕಾದಂಥ ಪರಿಸ್ಥಿತಿ ಬಂದೊದಗುತ್ತದೆ.
 
ಬೆಳೆದಂಥ ಬೆಳೆಗೆ ಸೂಕ್ತ ಬೆಲೆ ಸಿಗದೆ  ತನ್ನ ತಂದೆ  ನೇಣಿಗೆ ಶರಣಾದಾಗ ಬಸವರಾಜ ಅನಿವಾರ್ಯವಾಗಿ ಕುಟುಂಬದ ಹೊಣೆ ಹೊರಬೇಕಾಗುತ್ತದೆ.
 
ಊರಿನಲ್ಲೇ ಇದ್ದುಕೊಂಡು ವ್ಯವಸಾಯ ಮುಂದುವರೆಸುವ ಬಸವರಾಜನಿಗೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಾಗುತ್ತದೆ.   
 
ಆ ಊರಿನ ಸಾಹುಕಾರ ವೀರಭದ್ರ ಜಾಗೀರ್ದಾರ್  ರಾಜಕಾರಣಿಗಳ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾನೆ. ಮೇಲ್ನೋಟಕ್ಕೆ ಹಳ್ಳಿಯ ಜನರಿಗೆ ಒಳ್ಳೆಯವನಾಗಿ ಕಂಡರೂ,  ತನ್ನ ಸಹಚರರ ಮೂಲಕ ಅವರ ಬೆಳೆಯನ್ನು ವಶಪಡಿಸಿಕೊಂಡು ಅವರನ್ನು ಸಂಕಷ್ಟಕ್ಕೆ ದೂಡುತ್ತಿರುತ್ತಾನೆ. ಇದೆಲ್ಲ  ಗೊತ್ತಿದ್ದರೂ  ಏನೂ ಮಾತಾಡದಂಥ ಪರಿಸ್ಥಿತಿ ಆ ಊರಿನ ರೈತರದು.
 
ವಿದೇಶಿ ಬಂಡವಾಳಶಾಹಿಗಳಿಗೆ ಸೂಪರ್ ಮಾರ್ಕೆಟ್ ನಿರ್ಮಿಸಲು ಸಾವಿರಾರು ಎಕರೆ ಭೂಮಿಯನ್ನು  ರೈತರಿಂದ  ಕಸಿದುಕೊಂಡು ನೀಡಲು ಕುತಂತ್ರ ರೂಪಿಸುತ್ತಾನೆ. ರೈತರನ್ನು ಇಕಟ್ಟಿಗೆ ಸಿಲುಕಿಸಿ ವಶಪಡಿಸಿಕೊಳ್ಳಲು ‌ಮುಂದಾಗುತ್ಗಾನೆ. ಇದು ಬಸವನಿಗೆ ಗೊತ್ತಾಗಿ ಆತ ತನ್ನ ಭೂಮಿಯನ್ನು ಕೊಡಲು ಒಪ್ಪುವುದಿಲ್ಲ. ಜೊತೆಗೆ ತಮ್ಮ ರೈತ ಬಂಧುಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುತ್ತಾನೆ. ಇದೇ ರೈತ ಹೋರಾಟಕ್ಕೆ ನಾಂದಿಯಾಗುತ್ತದೆ. ಮುಂದೆ ಇದು ಸರಕಾರಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಪತ್ರಕರ್ತ  ಬಸವರಾಜ (ಅಚ್ಚುತ್ ಕುಮಾರ್) ರೈತರ ಹೋರಾಟಕ್ಕೆ  ಬೆಂಬಲವಾಗಿ  ನಿಲ್ಲುತ್ತಾನೆ.  ಪತ್ರಿಕೆ ಹಾಗೂ ವಾಹಿನಿಗಳಲ್ಲಿ ರೈತರ ಪ್ರತಿಭಟನೆಯ ಸುದ್ದಿ ದೊಡ್ಡದಾಗಿ ಬಿತ್ತರವಾಗುತ್ತದೆ. 
 
ಟಿವಿ ವಾಹಿನಿ ಸಂದರ್ಶನದಲ್ಲಿ ಮಾತನಾಡಿದ ಬಸವರಾಜ  ರೈತ ಬೆಳೆದ ಬೆಲೆಗೆ ಲಾಭದಾಯಕ ಬೆಲೆ ಸಿಗಬೇಕಾದರೆ ಆತನೇ ನೇರವಾಗಿ  ಜನರನ್ನು ತಲುಪಬೇಕು ಎಂಬ ಮಾತು ಹೊರಹಾಕುತ್ತಾನೆ. ಇದು ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗುತ್ತದೆ. ತಪ್ಪು ಮಾಡದ ಬಸವ ಕುತಂತ್ರಿಗಳ ಷಡ್ಯಂತ್ರಕ್ಕೆ ನಲುಗಿ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೆಲ್ಲ ಹೇಗೆ ಅಂತ್ಯ ಹೇಳಿದ್ದಾರೆ ಎನ್ನುವುದೆ ಚಿತ್ರದ ಕ್ಲೈಮ್ಯಾಕ್ಸ್.
 
ರೈತರ ಸಮಸ್ಯೆಗಳನ್ನು ಇಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗದಿದ್ದರೂ ಒಂದು ಪ್ರಯತ್ನವಂತೂ ನಡೆಸಲಾಗಿದೆ.
 
ಇಡೀ ಚಿತ್ರವನ್ನು ಆವರಿಸಿಕೊಂಡಿರುವ  ನವೀನ್ ಶಂಕರ್ ತಮ್ಮ  ಅದ್ಭುತ ನಟನೆಯ ಮೂಲಕ ಪ್ರೇಕ್ಷಕರನ್ನೂ  ಆವರಿಸಿಕೊಳ್ಳುತ್ತಾರೆ. ರೈತರಿಗಾಗುತ್ತಿರುವ ಅನ್ಯಾಯ  ಮತ್ತು ಅದಕ್ಕಾಗಿ ಹುಡುಕಿಕೊಳ್ಳಬೇಕಾದ ದಾರಿಯನ್ನು ಜನರಿಗೆ ಮುಟ್ಟುವಂತೆ ಹೇಳುವ ಪ್ರಯತ್ನ ಮಾಡಿದ್ದಾರೆ.  ಪತ್ರಕರ್ತೆಯಾಗಿ ಅರ್ಚನಾ ಜೋಯಿಸ್ ಗಮನ ಸಳೆಯುತ್ತಾರೆ. ಅವರ ಪಾತ್ರವನ್ನು ಇನ್ನಷ್ಟು ಬಳಸಿಕೊಳ್ಳಬಹುದಿತ್ತು.
 
ಇನ್ನು ನಿರ್ದೇಶಕ ಶ್ರೀಕಾಂತ್ ಕಟಗಿ ತಮ್ಮ ಮೊದಲ ಪ್ರಯತ್ನದಲ್ಲೇ ಸೂಕ್ಷ್ಮ ವಿಚಾರವನ್ನು  ಅಚ್ಚುಕಟ್ಟಾಗಿ ತೆರಮೇಲೆ ತರುವ ಪ್ರಯತ್ನ ಮಾಡಿದ್ದಾರೆ.  ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ  ಶಿವಸಾಗರ್ ಅವರ ಕೆಲಸವೂ  ಉತ್ತಮವಾಗಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed